ರತ್ನಕೀರ್ತಿ
ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ವಿದ್ವಾಂಸ ಹಾಗೂ ಪಂಡಿತ. ಅಪೋಹ ಸಿದ್ಧಿ ಮತ್ತು ಕ್ಷಣಭಂಗ ಸಿದ್ಧಿ ಈತನ ಎರಡು ಪ್ರಸಿದ್ಧ ಗ್ರಂಥಗಳು. ಈ ಎರಡು ಕೃತಿಗಳಲ್ಲಿ ಲೋಕನಾಥನಿಗೆ ಸಮಂತಭದ್ರನಿಗೆ ನಮಸ್ಕಾರಗಳನ್ನು ಹೇಳಿ ಗ್ರಂಥವನ್ನು ಆರಂಭಿಸುತ್ತಾನೆ. 

	ಅಪೋಹ ಸಿದ್ಧಿ ಅಪೋಹ ಸಿದ್ಧಾಂತವನ್ನು ಕುರಿತ ಗ್ರಂಥ. ಈ ಸಿದ್ಧಾಂತದ ಪ್ರಕಾರ ಉಪಯೋಗದಲ್ಲಿರುವ ಯಾವುದೇ ಪದ ಭಾವಾತ್ಮಕ ಹಾಗೂ ನಕಾರಾತ್ಮಕ ಅರ್ಥಗಳೆರಡನ್ನೂ ತನ್ನಲ್ಲೆ ಹೊಂದಿರುತ್ತದೆ. ಭಾವಾತ್ಮಕ ವಸ್ತುವನ್ನು ಸೂಚಿಸುವಾಗ ಅದು ಭಾವಾತ್ಮಕ ವಸ್ತುವಿನಿಂದ ಭಿನ್ನವಾದ ಎಲ್ಲವನ್ನೂ ಹೊರತುಪಡಿಸುತ್ತದೆ.

	ಕ್ಷಣಭಂಗ ಸಿದ್ಧಿ ಎಂಬ ಗ್ರಂಥ ಬೌದ್ಧದರ್ಶನದ ಕ್ಷಣಿಕವಾದವನ್ನು ಕುರಿತು ಚರ್ಚಿಸುತ್ತದೆ, ಕ್ಷಣಿಕವಾದದ ಪ್ರಕಾರ, ಈ ಪ್ರಪಂಚದಲ್ಲಿ ಶಾಶ್ವತ ಹಾಗೂ ಚಿರಕಾಲ ಇರುವಂಥದ್ದು, ಸದಾಕಾಲ ಒಂದೇ ತೆರನಾಗಿ ಇರುವಂಥದು ಯಾವುದೂ ಇಲ್ಲ. ಎಲ್ಲವೂ ಕ್ಷಣಿಕ. ಪ್ರತಿಯೊಂದು ವಸ್ತುವೂ ಕ್ಷಣಾರ್ಧದಲ್ಲಿ ಹುಟ್ಟಿ ಕ್ಷಣಾರ್ಧದಲ್ಲಿ ಬೆಳೆದು, ಕ್ಷಣಾರ್ಧದಲ್ಲಿ ಅವಸಾನವನ್ನು ಹೊಂದುತ್ತದೆ. ಜಗತ್ತಿನಲ್ಲಿ ಶಾಶ್ವತವಾದದ್ದೊಂದಿದೆ ಎಂದು ನಂಬುವುದೇ ಅಜ್ಞಾನ, ಭ್ರಮೆ ಎಂದು ಈ ಗ್ರಂಥದಲ್ಲಿ ಹೇಳಿದೆ.

	ಈ ಎರಡು ಗ್ರಂಥಗಳಲ್ಲೂ ಧರ್ಮೋತ್ತರ, ನ್ಯಾಯಭೂಷಣ ಮತ್ತು ವಾಚಸ್ಪತಿ ಮಿಧಶ್ರಿತ ಅಪೋಹ ಮತ್ತು ಕ್ಷಣಭಂಗ ಅರ್ಥಪ್ರತಿಪಾದನೆಯನ್ನು ರತ್ನಕೀರ್ತಿ ತೀವ್ರವಾಗಿ ಖಂಡಿಸಿದ್ದಾನೆ. ಈ ಗ್ರಂಥಗಳಲ್ಲದೆ, ಸ್ಥಿರಸಿದ್ಧಿದೂಷಣ ಮತ್ತು ಚಿತ್ರಾದ್ವೈತಸಿದ್ಧಿ ಎಂಬ ಮತ್ತೆರಡು ಗ್ರಂಥಗಳನ್ನೂ ಬರೆದಿದ್ದಾನೆಂದು ಪ್ರತೀತಿ. 							
(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ